ನಿಗೂಢವಾಗಿ ನಾಪತ್ತೆಯಾಗುವ ಮೂಲಕ ರಾಜ್ಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ಫರಂಗಿಪೇಟೆಯ ವಿದ್ಯಾರ್ಥಿ ದಿಗಂತ್ ಪರೀಕ್ಷೆಗೆ ಹೆದರಿದ್ದ ಎಂಬ ಮಾತು ಕೇಳಿ ಬರುತ್ತಿದೆ.
ನಗರದ ಕಪಿತಾನಿಯೋದ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ದಿಗಂತ್ ಪರೀಕ್ಷೆಗೆ ಹೆದರಿದ್ದ ಎನ್ನಲಾಗಿದೆ. ಶನಿವಾರ ಸಂಜೆ ತನ್ನ ತಾಯಿಗೆ ಫೋನ್ ಕರೆ ಮಾಡಿ ನಾನು ಉಡುಪಿಯಲ್ಲಿದ್ದೇನೆ. ನಾನೇನು ಓಡಿ ಹೋಗೋ ಹುಡುಗ ಅಲ್ಲ, ನನ್ನನ್ನು ಯಾರೋ ಹೊತ್ತುಕೊಂಡು ಹೋಗಿದ್ದಾರೆ. ಎಲ್ಲವನ್ನೂ ನಾನು ಬಂದು ಹೇಳ್ತೇನೆ ಎನ್ನುತ್ತಾ ಕರೆ ಕಡಿತಗೊಳಿಸಿದ್ದ
ಪೊಲೀಸರು ಆತನನ್ನು ವಿಚಾರಣೆಗೊಳಪಡಿಸಿದಾಗ, ಕಳೆದ 12 ದಿನಗಳ ಅವಧಿಯಲ್ಲಿ ತಾನು ನಡೆದಾಡಿದ ಸ್ಥಳಗಳು ಮತ್ತು ಮಾಡಿದ್ದ ಕೃತ್ಯಗಳನ್ನು ವಿವರಿಸಿದ್ದಾನೆ. ಫೆಬ್ರವರಿ 25ರಂದು ದೇವಾಲಯಕ್ಕೆ ಹೋಗುವುದಾಗಿ ಹೇಳಿದ ದಿಗಂತ್, ತನ್ನ ಚಪ್ಪಲಿಗಳನ್ನು ರೈಲ್ವೆ ಹಳಿಯ ಬಳಿ ಬಿಟ್ಟು, ಒಂದು ಸ್ನೇಹಿತನಿಂದ ಪಡೆದಿದ್ದ ಶೂ ಧರಿಸಿ ರೈಲ್ವೆ ಹಳಿಯ ಮೂಲಕ ಅರ್ಕುಳದವರೆಗೆ ನಡೆದಿದ್ದ. ನಂತರ ಬೈಕ್ ಹಾಗೂ ಬಸ್ ಮೂಲಕ ಶಿವಮೊಗ್ಗ, ಮೈಸೂರು, ಕೆಂಗೇರಿ, ನಂದಿಹಿಲ್ಸ್ ಸೇರಿ ಹಲವೆಡೆಗಳ ಪ್ರವಾಸ ಮಾಡಿದ್ದಾನೆ.
ರೈಲಿನಲ್ಲಿ ಉಡುಪಿಗೆ ತೆರಳುವಾಗ, ತನ್ನ ಮನೆಯ ಸುತ್ತ ಪೊಲೀಸ್ ಹಾಗೂ ಸಾರ್ವಜನಿಕರು ಜಮಾಯಿಸಿರುವುದನ್ನು ಗಮನಿಸಿದ ದಿಗಂತ್, ಅಪರಾಹ್ನ ಹಸಿವಾದ ಕಾರಣ ಉಡುಪಿಯ ಡಿ-ಮಾರ್ಟ್ ಗೆ ತೆರಳಿ ಬಿಸ್ಕೆಟ್ ಖರೀದಿಸುವ ಸಂದರ್ಭ ಸಿಬ್ಬಂದಿಗೆ ಸಿಕ್ಕಿಬಿದ್ದಿದ್ದಾನೆ.
ದಿಗಂತ್ ನಾಪತ್ತೆಯ ಹಿನ್ನೆಲೆಯಲ್ಲಿ ಕುಟುಂಬದವರು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರಿಂದ, ಪೊಲೀಸರು ಹೈಕೋರ್ಟ್ ಗೆ ಹಾಜರುಪಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.