ಬೆಂಗಳೂರು: ಗೇನ್ ಬಿಟ್ ಕಾಯಿನ್ ಮತ್ತು ಕ್ರಿಪ್ಟೋ ಕರೆನ್ಸಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಬೆಂಗಳೂರು ಸೇರಿದಂತೆ ದೇಶದ 60 ಕಡೆಗಳಲ್ಲಿ ದಾಳಿ ನಡೆಸಿದ್ದಾರೆ. ಬೆಂಗಳೂರು, ಪುಣೆ, ಚಂಡೀಗಢ, ದೆಹಲಿ ಎನ್‌ಸಿಆರ್, ನಾಂದೇಡ್, ಕೊಲ್ಲಾಪುರ ಸೇರಿದಂತೆ ಹಲವು ನಗರಗಳಲ್ಲಿ ಈ ದಾಳಿ ನಡೆಸಲಾಗಿದೆ.
ಪ್ರಮುಖ ಆರೋಪಿಗಳ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿ ಪರಿಶೀಲನೆ:
ಈ ಹಗರಣದಲ್ಲಿ ಭಾಗಿಯಾಗಿರುವ ಪ್ರಮುಖ ಆರೋಪಿಗಳ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ. ದೇಶದ ಹಲವು ರಾಜ್ಯಗಳಲ್ಲಿ ಗೇನ್ ಬಿಟ್ ಕಾಯಿನ್ ಮತ್ತು ಕ್ರಿಪ್ಟೋ ಕರೆನ್ಸಿ ಹಗರಣಕ್ಕೆ ಸಂಬಂಧಿಸಿದಂತೆ ದೂರುಗಳು ದಾಖಲಾಗಿದ್ದು, ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿತ್ತು.
6,600 ಕೋಟಿ ರೂಪಾಯಿ ಮೌಲ್ಯದ ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ, ಎನ್‌ಸಿಆರ್, ಪುಣೆ, ಚಂಡೀಗಢ, ನಾಂದೇಡ್, ಕೊಲ್ಲಾಪುರ ಮತ್ತು ಬೆಂಗಳೂರಿನ ಪ್ರಮುಖ ಆರೋಪಿಗಳಿಗೆ ಸಂಬಂಧಿಸಿದ ಸ್ಥಳಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೊಡ್ಡ ಮಟ್ಟದ ಹಣಕಾಸಿನ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ಬೆಂಗಳೂರು ಸೇರಿದಂತೆ 60 ಕಡೆಗಳಲ್ಲಿ ದಾಳಿ ನಡೆಸಿ ಶೋಧನೆ ನಡೆಸಿದ್ದು, ಕ್ರಿಪ್ಟೋ ವ್ಯಾಲೆಟ್‌ಗಳು, ಡಿಜಿಟಲ್ ಸಾಕ್ಷ್ಯಗಳು ಸೇರಿದಂತೆ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಇಮೇಲ್ ಮತ್ತು ಕ್ಲೌಡ್‌ನಲ್ಲಿರುವ ಮಾಹಿತಿಯನ್ನೂ ಸಹ ವಶಕ್ಕೆ ಪಡೆದುಕೊಂಡಿದ್ದು, ತನಿಖೆ ಮುಂದುವರೆಸಲಾಗುತ್ತಿದೆ.
ಏನಿದು ಪ್ರಕರಣ?
ಅಮಿತ್ ಭಾರದ್ವಾಜ್ (ಈಗ ಮೃತ) ಮತ್ತು ಅವರ ಸಹೋದರ ಅಜಯ್ ಭಾರದ್ವಾಜ್ ಅವರನ್ನು ಮಾಸ್ಟರ್ ಮೈಂಡ್ ಎಂದು ಪರಿಗಣಿಸಲಾಗಿರುವ ಈ ಹಗರಣವನ್ನು ಆನ್‌ಲೈನ್ ವೇದಿಕೆಗಳ ಮೂಲಕ ನಡೆಸಲಾಗುತ್ತಿತ್ತು. ಇದನ್ನು 2015 ರಲ್ಲಿ ವೇರಿಯೇಬಲ್ ಟೆಕ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ಪ್ರಾರಂಭಿಸಲಾಗಿತ್ತು. ಈ ಯೋಜನೆಯು ಹೂಡಿಕೆದಾರರಿಗೆ 18 ತಿಂಗಳುಗಳಲ್ಲಿ ಬಿಟ್ ಕಾಯಿನ್‌ನಲ್ಲಿ 10% ಮಾಸಿಕ ಆದಾಯದ ಭರವಸೆ ನೀಡಿತ್ತು.
ನಷ್ಟವನ್ನು ಮರೆಮಾಚಲು, ಈ ಯೋಜನೆಯು ಪಾವತಿಯನ್ನು ಕಡಿಮೆ ಮೌಲ್ಯದ ಕ್ರಿಪ್ಟೋ ಕರೆನ್ಸಿಯಾದ ಎಂಸಿಎಪಿಗೆ ಬದಲಾಯಿಸಿತು. ಅದರ ಪ್ರಮಾಣ ಮತ್ತು ಜಾಗತಿಕ ಸಂಪರ್ಕಗಳಿಂದಾಗಿ ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ತನಿಖೆಗೆ ಸಿಬಿಐಗೆ ವರ್ಗಾಯಿಸಿತ್ತು. ತನಿಖಾಧಿಕಾರಿಗಳು ದುರುಪಯೋಗಪಡಿಸಿಕೊಂಡ ಹಣ ಮತ್ತು ಇದರಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಪತ್ತೆಹಚ್ಚುವ ಕೆಲಸ ಮಾಡುತ್ತಿದ್ದಾರೆ.