ನವದೆಹಲಿ: ಮಾ.10 – ವ್ಯಾಪಾರ ಮತ್ತು ಹೂಡಿಕೆ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸುವ ಉದ್ದೇಶದಿಂದ ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ಮಾರ್ಚ್ 16 ರಿಂದ ಭಾರತಕ್ಕೆ ಐದು ದಿನಗಳ ಭೇಟಿಗೆ ಆಗಮಿಸಲಿದ್ದಾರೆ.
ಪ್ರಧಾನಿಯಾಗಿ ಲಕ್ಸನ್ ಅವರ ಇದು ಮೊದಲ ಭಾರತ ಪ್ರವಾಸವಾಗಿದ್ದು, ಈ ಸಂದರ್ಭದಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಮಾರ್ಚ್ 17 ರಂದು ನವದೆಹಲಿಯಲ್ಲಿ ನಡೆಯುವ 10ನೇ ರೈಸಿನಾ ಸಂವಾದದ ಉದ್ಘಾಟನಾ ಅಧಿವೇಶನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಪ್ರಮುಖ ಭಾಷಣ ನೀಡಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಈ ಭೇಟಿಯೊಂದಿಗೆ, ಉನ್ನತ ಮಟ್ಟದ ನಿಯೋಗವೂ ಭಾರತಕ್ಕೆ ಬರಲಿದ್ದು, ಇದರಲ್ಲಿ ಸಚಿವರು, ಹಿರಿಯ ಅಧಿಕಾರಿಗಳು, ಉದ್ಯಮಿಗಳು, ಮಾಧ್ಯಮ ಪ್ರತಿನಿಧಿಗಳು ಮತ್ತು ಭಾರತೀಯ ವಲಸೆ ಸಮುದಾಯದ ಸದಸ್ಯರು ಭಾಗವಹಿಸಲಿದ್ದಾರೆ.
ಲಕ್ಸನ್ ಮಾರ್ಚ್ 19 ಮತ್ತು 20ರಂದು ಮುಂಬೈಗೆ ಭೇಟಿ ನೀಡಿದ ಬಳಿಕ ವೆಲ್ಲಿಂಗ್ಟನ್‌ಗೆ ಮರಳಲಿದ್ದಾರೆ. ಅವರು ಮಾರ್ಚ್ 17 ರಂದು ಪ್ರಧಾನಿ ಮೋದಿಯವರೊಂದಿಗೆ ದ್ವಿಪಕ್ಷೀಯ ಸಂಬಂಧಗಳ ವಿವಿಧ ಆಯಾಮಗಳ ಕುರಿತು ಚರ್ಚೆ ನಡೆಸಲಿದ್ದಾರೆ.
ಪ್ರಧಾನಿ ಮೋದಿ ಲಕ್ಸನ್ ಅವರ ಗೌರವಾರ್ಥವಾಗಿ ಭೋಜನ ಕೂಟ ಆಯೋಜಿಸಿದ್ದು, ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸಹ ಭೇಟಿಯಾಗಲಿದ್ದಾರೆ.
ಈ ಭೇಟಿಯು ಭಾರತ-ನ್ಯೂಜಿಲೆಂಡ್ ನಡುವಿನ ದೀರ್ಘಕಾಲೀನ ಸ್ನೇಹ ಮತ್ತು ಸಹಕಾರವನ್ನು ಮತ್ತಷ್ಟು ಗಾಢಗೊಳಿಸುವುದರೊಂದಿಗೆ, ಎಲ್ಲಾ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸಲು ಉಭಯ ರಾಷ್ಟ್ರಗಳ ಬದ್ಧತೆಯನ್ನು ಪುನರುಚ್ಚರಿಸುತ್ತದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.